ಕೋಲಾರ ಚಿನ್ನದ ಗಣಿ ಪ್ರದೇಶದ ಚಾಂಫೀಯನ್‌ರೀಫ್ಸ್‌ನಲ್ಲಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ದಿನಾಂಕ ೨೫.೦೧.೨೦೨೩ ಬುಧವಾರದಂದು ಮತದಾರರ ದಿನಾಚರಣೆಯನ್ನು ರಾಷ್ಟ್ರೀಯ ಮತದಾರರ ದಿವಸವನ್ನಾಗಿ ಪ್ರತಿಜ್ಞಾವಿಧಿ ಸ್ವೀಕಾರದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರತಿಜ್ಞಾ ವಿಧಿಯ ಸ್ವೀಕಾರ ಕಾರ್ಯಕ್ರಮದಲ್ಲಿ, ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇದ ಭಾವವಿಲ್ಲದೇ ಭಾರತದ ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಎಲ್ಲಾ ಜನತೆಯು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಪ್ರತಿಜ್ಞೆ ಮಾಡಿದರು. ಅಲ್ಲದೇ, ಯಾವುದೇ ಒತ್ತಡಗಳಿಲ್ಲದೇ ನಾವೆಲ್ಲರೂ ಚುನಾವಣೆಯಲ್ಲಿ ನಿರ್ಭಿತರಾಗಿ ಮತ ಚಲಾಯಿಸುವುದಾಗಿ ಒಮ್ಮನಸ್ಸಿನಿಂದ ಪ್ರತಿಜ್ಞೆ ಮಾಡಿದರು.
ಡಿವೈಎಸ್ಪಿ ವಿ.ಎಲ್.ರಮೇಶ್, ಪೊಲೀಸ್ ಇನ್ಸ್‌ಪೆಕ್ಟರ್ ಆರ್.ದಯಾನಂದ, ನವೀನ್‌ಕುಮಾರ್, ಪಿಎಸ್‌ಐ ನಾಗಪ್ಪ ಖಾನಾಪೂರ, ಪ್ರಶಾಂತ್, ಜಿಲ್ಲಾ ಪೊಲೀಸ್ ಕಛೇರಿಯ ಶಾಖಾಧೀಕ್ಷಕ ಎಂ.ಮೂರ್ತಿ, ಎ.ನಾಜೀಮಾಬಾನು, ಆಪ್ತ ಸಹಾಯಕಿ ಜಿ.ಮಮತಾ, ಎಎಸ್‌ಐ ಸೈಯದ್ ಮುಸ್ತಾಕ್ ಅಹ್ಮದ್, ಜಿ.ರಮೇಶ್, ಎನ್.ಸುರೇಶ್‌ಬಾಬು, ಕೃಷ್ಣಪ್ಪ, ವಾಸುದೇವಸಿಂಗ್, ಮಧುಸೂಧನ, ಪಾರ್ಥಸಾರಥಿ ಸೇರಿದಂತೆ ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಕೆ.ಜಿ.ಎಫ್ ಪೊಲೀಸ್ ಜಿಲ್ಲಾ ವತಿಯಿಂದ ದಿನಾಂಕ ೨೩.೦೧.೨೦೨೩ ರಂದು ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ಆವರಣದಲ್ಲಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ. ಧರಣೀದೇವಿ, ಐ.ಪಿ.ಎಸ್., ಪೊಲೀಸ್ ಉಪಾಧೀಕ್ಷಕರಾದ ಶ್ರೀ. ವಿ.ಎಲ್. ರಮೇಶ್, ರಾಬರ್ಟ್‌ಸನ್‌ಪೇಟೆ ವೃತ್ತ ನಿರೀಕ್ಷಕರಾದ ಶ್ರೀ. ಕುಮಾರ್‌ಸ್ವಾಮಿ ಹಾಗೂ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಶ್ರೀಮತಿ. ಶೃತಿ ಮತ್ತು ಶ್ರೀಮತಿ. ಮಾಲಾ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಟೋ ಚಾಲಕರು, ಕಾಲೇಜು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ನಿಯಮಗಳ ಬಗ್ಗೆ ಅರಿವು ಮೂಡಿಸಿ ನಿಯಮಗಳನ್ನು ಪಾಲನೆ ಮಾಡುವಂತೆ ತಿಳಿಸಲಾಯಿತು.
ಜಿಲ್ಲಾ ಪೊಲೀಸ್ ಕಛೇರಿಯ ಡಿಸಿಆರ್‌ಬಿ ವಿಭಾಗದ ಪಿಎಸ್‌ಐ ಸಿ.ಕೃಷ್ಣಪ್ಪ ಅವರು ಡಿ.೩೧ ರಂದು ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಅವರಿಗೆ ಕೆಜಿಎಫ್ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಏರ್ಪಡಿಸಿದ್ದ, ಹಾರ್ಧಿಕ ಬಿಳ್ಕೋಡುಗೆ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಮಾಲಗತ್ತಿ ಅವರು ಅಧ್ಯಕ್ಷತೆ ವಹಿಸಿ ನಿವೃತ್ತ ಪೊಲೀಸ್ ಅಧಿಕಾರಿಗೆ ವಿಶ್ರಾಂತಿ ಜೀವನಕ್ಕೆ ಶುಭ ಕೋರಿದರು.
ಸೇವೆಯಲ್ಲಿರುವಾಗ ಪ್ರತಿಯೊಬ್ಬ ಸರ್ಕಾರಿ ನೌಕರರು ಉತ್ತಮವಾದ ಸೇವೆಯನ್ನು ಸಲ್ಲಿಸುವ ಮೂಲಕ, ಅವರ ಸೇವೆಯು ಮುಂದಿನ ಜನಾಂಗಕ್ಕೆ ಆದರ್ಶವಾಗುವ ಮೂಲಕ ಜನಸಾಮಾನ್ಯರ ಮನಗೆಲ್ಲುವ ಕಾರ್ಯ ಮಾಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಡಾ|| ಕೆ.ಧರಣೀದೇವಿ ಮಾಲಗತ್ತಿ ಅವರು ಕರೆ ನೀಡಿದರು. ನಿವೃತ್ತ ಅಧಿಕಾರಿ ಕೃಷ್ಣಪ್ಪ ಅವರು ಪೊಲೀಸ್ ಇಲಾಖೆಯ ವಿವಿಧ ವಿಭಾಗ, ಠಾಣೆ, ಕಛೇರಿಗಳಲ್ಲಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸುವ ಮೂಲಕ ೩೦ ವರ್ಷಗಳ ಸೇವಾವದಿಯಲ್ಲಿ ಯಶಸ್ವಿಯಾಗಿರುತ್ತಾರೆ.
ಇವರ ಸೇವೆ, ಅನುಭವವು ಎಲ್ಲರಿಗೂ ಮಾರ್ಗದರ್ಶನವಾಗಲೆಂದರು. ಉದ್ಯೋಗಿಗಳಿಗೆ ನಿವೃತ್ತಿಯು ಇದ್ದೇ ಇರುತ್ತದೆ, ಇರುವುದರೊಳಗೆ ಉತ್ತಮವಾದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಬೇಕೆಂದರು. ನೈತಿಕ ಬೆಂಬಲದೊಂದಿಗೆ ಉತ್ತಮ ಬಾಂಧವ್ಯದ ಪರಿಸರದಲ್ಲಿ ಸರ್ಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸುವ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಡಾ|| ಕೆ.ಧರಣೀದೇವಿ ಮಾಲಗತ್ತಿ ಅವರು ಕರೆ ನೀಡಿದರು.
ನಿವೃತ್ತರಾದ ಪಿಎಸ್‌ಐ ಸಿ.ಕೃಷ್ಣಪ್ಪ ಅವರನ್ನು ಶಾಲು ಹೊದಿಸಿ, ಹಣ್ಣು ಹಂಪಲು ನೀಡಿ ಸನ್ಮಾನಿಸಿ, ಸೇವಾ ಪ್ರಮಾಣಪತ್ರ, ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ ಅವರು ಉಪಸ್ಥಿತರಿದ್ದರು. ಡಿಸಿಆರ್‌ಬಿ ವಿಭಾಗದ ಎಎಸ್‌ಐ ಜಿ.ರಮೇಶ, ಮಧುಸೂಧನ ಸೇರಿದಂತೆ ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ದಿನಾಂಕ 21.12.2022 ರಂದು ಕೆ.ಜಿ.ಎಫ್ ಪೊಲೀಸ್ ಜಿಲ್ಲಾವತಿಯಿಂದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯಗಳ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ರಾಬರ್ಟ್‌ಸನ್‌ಪೇಟೆಯಲ್ಲಿ ಪೊಲೀಸ್ ಅಧೀಕ್ಷಕರಾದ ಡಾ. ಕೆ.ಧರಣೀದೇವಿ, ಐ.ಪಿ.ಎಸ್. ರವರು ಚಾಲನೆ ನೀಡಿದರು.
ದಿನಾಂಕ 02.12.2022 ರಂದು ಬೆಳಿಗ್ಗೆ ಡಿ.ಎ.ಆರ್. ಪೊಲೀಸ್ ಮೈದಾನಲ್ಲಿ ವಾರದ ಕವಾಯಿತು ನಡೆಸಲಾಯಿತು. ನಂತರ ಉತ್ತಮ ಕರ್ತವ್ಯ ನಿರ್ವಹಿಸಿದ ಶ್ರೀ. ವಿ.ಎಲ್. ರಮೇಶ, ಪೊಲೀಸ್ ಉಪಾಧೀಕ್ಷಕರು, ಕೆ.ಜಿ.ಎಫ್, ಶ್ರೀ. ಆನಂದ್ ಕುಮಾರ್, ಸಿಪಿಐ ಕಾಮಸಮುದ್ರಂ, ಶ್ರೀ. ಸಂಜೀವರಾಯಪ್ಪ, ಪಿಐ ಬಂಗಾರಪೇಟೆ, ಪ್ರೊ ಪಿಎಸ್‌ಐ ಶ್ರೀ ಸುನಿಲ್ ಪುಂಡಲಿಂಗ ಐರೋಡಗಿ ಎ.ಎಸ್.ಐ ವೆಂಕಟೇಶ್, ಹೆಡ್ ಕಾನ್ಸ್‌ಟೇಬಲ್ ಗಳಾದ ಲಕ್ಷ್ಮಿನಾರಾಯಣ, ರಾಮಕೃಷ್ಣ ರೆಡ್ಡಿ, ಮಂಜುನಾಥ್ ರೆಡ್ಡಿ , ಅನಿಲ್ ಕುಮಾರ್, ಮುನಾವರ್ ಪಾಷ, ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಕಾನ್ಸ್‌ಟೇಬಲ್ ರವರಾದ ವೆಂಕಟಾಚಲಪತಿ ರವರಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.
ಕೋಲಾರ ಚಿನ್ನದ ಗಣಿ ಪ್ರದೇಶದ ಚಾಂಫೀಯನ್‌ರೀಫ್ಸ್‌ನಲ್ಲಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಶನಿವಾರ 26.11.2022 ರಂದು ಬೆಳಿಗ್ಗೆ ಭಾರತದ ಸಂವಿಧಾನ ದಿನಾಚರಣೆಯನ್ನು ಪ್ರತಿಜ್ಞಾವಿಧಿ ಸ್ವೀಕಾರದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ. ಕೆ. ಧರಣೀದೇವಿ. ಐ.ಪಿ.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತದ ಸಂವಿಧಾನ ದಿನಾಚರಣೆಯ ಪ್ರತಿಜ್ಞಾ ವಿಧಿಯ ಸ್ವೀಕಾರ ಕಾರ್ಯಕ್ರಮದಲ್ಲಿ, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ, ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು; ಸ್ಥಾನಮಾನ ಮತ್ತು ಅವಕಾಶಗಳ ಸಮತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ, ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢಸಂಕಲ್ಪ ಮಾಡಿ, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ರೀತಿಯಲ್ಲಿ ೧೯೪೯ನೆಯ ಇಸವಿಯ ನವೆಂಬರ್ ೨೬ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ ಅಲ್ಲದೇ ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇದ ಭಾವವಿಲ್ಲದೇ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆಂದು ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಲಿಪಿಕ ಸಿಬ್ಬಂದಿಗಳೊಂದಿಗೆ ಪ್ರತಿಜ್ಞೆ ಮಾಡಲಾಯಿತು. ಕೆ.ಜಿ.ಎಫ್ ಘಟಕದ ಎಲ್ಲಾ ಪೊಲೀಸ್ ಠಾಣೆ/ವೃತ್ತ ಕಛೇರಿಗಳಲ್ಲಿ ಸಹ ಪ್ರತಿಜ್ಞೆ ಮಾಡಲಾಯಿತು
ಕೆಜಿಎಫ್ ಪೊಲೀಸ್ ಜಿಲ್ಲೆಯ 2022ನೇ ಸಾಲಿನ ಪೊಲೀಸರ ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಯಿತು. ಕೆಜಿಎಫ್‌ನ ಚಾಂಫೀಯನ್‌ರೀಫ್ಸ್‌ನಲ್ಲಿನ ಡಿ.ಎ.ಆರ್. ಪೊಲೀಸ್ ಕವಾಯಿತು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ವಾರ್ಷಿಕ ಪೊಲೀಸ್ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಶುಕ್ರವಾರ ದಿನಾಂಕ 18.11.2022 ರಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ವಲಯದ ಐಜಿಪಿ ಎಂ.ಚಂದ್ರಶೇಖರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿಜೇತರುಗಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದರು. ವರ್ಷಕ್ಕೊಮ್ಮೆ ನಡೆಯುವ ಪೊಲೀಸ್ ಕ್ರೀಡಾಕೂಟದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿರುವುದು ಸಂತಸ ತಂದಿದೆ, ಕರ್ತವ್ಯದ ಒತ್ತಡದ ನಡುವೆ ಸಿಲುಕಿರುವಂತಹ ಪೊಲೀಸರಿಗೂ ಮನೋರಂಜನೆ, ಕ್ರೀಡೋಲ್ಲಾಸ, ಪರಸ್ಪರ ಸ್ನೇಹ ಬಾಂಧವ್ಯಕ್ಕೆ ಕ್ರೀಡಾಕೂಟವು ಸಹಕಾರಿಯಾಗಿರುತ್ತದೆ. ಪೊಲೀಸರು ತಮ್ಮ ಕರ್ತವ್ಯ ನಿಷ್ಠೆಯನ್ನು ತೋರ್ಪಡಿಸಲು ಕುಟುಂಬ ಸದಸ್ಯರ ಬೆಂಬಲವು ಅಗತ್ಯವಾಗಿ ಬೇಕಿರುತ್ತದೆ. ಕೆಲಸದ ಒತ್ತಡವನ್ನು ಬದಿಗಿಟ್ಟು ಪೊಲೀಸರು ತಮ್ಮ ಕುಟುಂಬದ ಸದಸ್ಯರೊಂದಿಗೂ ಅನ್ಯೋನ್ಯತೆಯಿಂದ ಜೀವನ ನಡೆಸಲು ಕರೆ ನೀಡಿದರು. ಪೊಲೀಸರ ಕುರಿತು ಸಮಾಜದಲ್ಲಿ ಯಾವುದೇ ಕೀಳರಿಮೆ ಕಂಡುಬಾರದಂತೆ ನಡೆದುಕೊಳ್ಳಲು ಕಿವಿಮಾತು ಹೇಳಿದರು. ಅಪರಾಧಗಳು ಹೆಚ್ಚಾಗಲು ಒಂದು ಹಂತದಲ್ಲಿ ನಿರುದ್ಯೋಗ ಸಮಸ್ಯೆಯು ಕಾರಣ, ಉದ್ಯೋಗಾಂಕ್ಷಿಗಳಿಗೆ ಇಂದಿನ ಸಮಾಜದಲ್ಲಿ ಸ್ಪರ್ಧಾತ್ಮಕ ಪೈಪೋಟಿ ಇದ್ದು, ಯಾರೂ ಸಹ ಕೆಟ್ಟದ್ದನ್ನು ಬಯಸದೇ ಒಳ್ಳೆ ಮಾರ್ಗದಲ್ಲಿ ಮುನ್ನಡೆಯಬೇಕೆಂದರು. ಒಳ್ಳೆತನದ ಕರ್ತವ್ಯ ನಿಷ್ಠೆಯನ್ನು ತೋರ್ಪಡಿಸಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ಐಜಿಪಿ ಚಂದ್ರಶೇಖರ್ ಅವರು ಕರೆ ನೀಡಿದರು. ಕ್ರೀಡೆಗಳು ಪ್ರತಿಯೊಬ್ಬರಿಗೂ ಮುಖ್ಯ, ದೈಹಿಕವಾಗಿ, ಮಾನಸಿಕವಾಗಿ, ಶಾಂತಿ, ಸಂಯಮದಿಂದ ಕರ್ತವ್ಯ ನಿರ್ವಹಿಸಲು ಕ್ರೀಡೆಗಳು ಸಹಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದರು.
ಕ್ರೀಡಾಕೂಟಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಡಾ|| ಕೆ.ಧರಣೀದೇವಿ ಅವರು ಅಧ್ಯಕ್ಷತೆ ವಹಿಸಿದ್ದು, ಪೊಲೀಸರು ಕಾನೂನು ಸುವ್ಯವಸ್ಥೆ ಅಡಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುವ ಮಧ್ಯೆ ಮನೋವಿಕಾಸಕ್ಕಾಗಿ ವರ್ಷಕ್ಕೊಮ್ಮೆ ಕ್ರೀಡಾಕೂಟವನ್ನು ನಡೆಸುತ್ತಿದ್ದು, ಪ್ರಸ್ತುತ ಕೆಜಿಎಫ್‌ನಲ್ಲಿ ಮೂರು ದಿನಗಳ ಕಾಲ ನಡೆದ ಪೊಲೀಸ್ ಕ್ರೀಡಾಕೂಟದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೊಲೀಸರ ಮಕ್ಕಳಿಗೆ ಎಲ್ಲಾ ರೀತಿಯ ಕ್ರೀಡೆಗಳನ್ನು ನಡೆಸಲಾಯಿತು. ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿರುತ್ತಾರೆಂದರು. ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಐಜಿಪಿ ಚಂದ್ರಶೇಖರ್ ಅವರ ಪತ್ನಿ ಸೆಲಿಹಾ ಮುವ್ವ ಅವರು ವಿಶೇಷ ಆಹ್ವಾನಿತರಾಗಿದ್ದು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು.
ಕ್ರೀಡಾಕೂಟದ ಅತ್ಯುತ್ತಮ ಪಾರಿತೋಷಕವನ್ನು ಡಿ.ಎ.ಆರ್. ಪೊಲೀಸ್ ತಂಡವು ಪಡೆದುಕೊಂಡಿದೆ. ಕ್ರೀಡಾಕೂಟದಲ್ಲಿ ಆರ್.ಪಿ.ಐ. ವಿ. ಸೋಮಶೇಖರ್ ನೇತೃತ್ವದಲ್ಲಿ ಅತ್ಯುತ್ತಮ ರೀತಿಯಲ್ಲಿ, ಜನಾಕರ್ಷಕ ರೀತಿಯಲ್ಲಿ ಪಥಸಂಚಲನ ನಡೆಯಿತು. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೊಲೀಸರ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದ್ದರು. ಎಸ್ಪಿ ಡಾ|| ಕೆ.ಧರಣೀದೇವಿ ಅವರು ಮೊದಲಿಗೆ ಸ್ವಾಗತಿಸಿ, ಶರಣಪ್ಪ ಅವರು ಕಾರ್ಯಕ್ರಮ ನಿರೂಪಿಸಿದರು. ಇನ್ಸ್‌ಪೆಕ್ಟರ್ ಸೋಮಶೇಖರ್ ಅವರಿಂದ ವರದಿವಾಚನ, ಡಿವೈಎಸ್ಪಿ ವಿ.ಎಲ್.ರಮೇಶ್ ಅವರು ವಂದಿಸಿದರು.
ಜಿಲ್ಲಾ ಪೊಲೀಸ್ ವತಿಯಿಂದ ಏರ್ಪಡಿಸಿದ್ದ ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್.ಪಿ.ಸಿ.) ಯೋಜನೆಯನ್ನು ಕೆ.ಜಿ.ಎಫ್ ನ ಸರ್ಕಾರಿ ಬಾಲಕರ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು, ನಂತರ ಶಾಲೆಯ ಮಕ್ಕಳನ್ನು ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆೆಗೆ ಕರೆದುಕೊಂಡು ಬಂದು ಅವರಲ್ಲಿ ಪೊಲೀಸರ ಕರ್ತವ್ಯ, ಕಾನೂನಿನ ಅರಿವು, ಸಂಚಾರ ನಿಯಂತ್ರಣ, ಅಪರಾಧಗಳ ಕಡಿವಾಣ ಬಗ್ಗೆ ಅರಿವು ಮೂಡಿಸಲಾಯಿತು.